ನರಸಿಂಹಾಚಾರ್, ಡಿ ಎಲ್
	1906-1971. ಕನ್ನಡ ನಾಡಿನ ವಿಖ್ಯಾತ ವಿದ್ವಾಂಸರು. ಕನ್ನಡ ಸಾಹಿತ್ಯ, ಭಾಷೆ, ಗ್ರಂಥಸಂಪಾದನೆ- ಹೀಗೆ ಅನೇಕ ಕ್ಷೇತ್ರಗಳಲ್ಲಿ ಮೌಲಿಕ ಕೆಲಸ ಮಾಡಿದ್ದಾರೆ. ಇವರ ಪೂರ್ಣ ಹೆಸರು ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ ಎಂದು. ಇವರು 27-10-1906ರಂದು, ಚಿಕ್ಕನಾಯಕನಹಳ್ಳಿಯಲ್ಲಿ ತಮ್ಮ ಮಾತಾಮಹ ಅಣ್ಣಾಸ್ವಾಮಿ ಅಯ್ಯಂಗಾರರ ಮನೆಯಲ್ಲಿ ಹುಟ್ಟಿದರು. ಬಾಲ್ಯವಿದ್ಯಾಭ್ಯಾಸ ಪಾವಗಡ, ಮಧುಗಿರಿ, ಶಿರಾ ಹಾಗೂ ತುಮಕೂರುಗಳಲ್ಲಿಯೂ ಉನ್ನತ ವಿದ್ಯಾಭ್ಯಾಸ ಬೆಂಗಳೂರು ಮೈಸೂರುಗಳಲ್ಲಿಯೂ ನಡೆದುವು. ಮಾತಾಮಹರೂ ತಂದೆಯವರೂ ಸರ್ಕಾರಿ ಹುದ್ದೆಯನ್ನು ಹಿಡಿದವರಾಗಿದ್ದರೂ ಮನೆಯ ಸುಸಂಸ್ಕøತ ವಿದ್ಯಾವಂತ ವಾತಾವರಣ ಆಚಾರ್ಯರ ಬಹುಮುಖ ವ್ಯಕ್ತಿತ್ವದ ವಿಕಾಸಕ್ಕೆ ತುಂಬ ಪೋಷಣೆ ನೀಡಿತು. ಎಂಟ್ರೆನ್ಸ್ ಪರೀಕ್ಷೆಯನ್ನು ತುಮಕೂರಿನಲ್ಲಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು (1924). ಭೌತಶಾಸ್ತ್ರ, ರಾಸಾಯನಶಾಸ್ತ್ರಗಳನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಂಡು ಆಟ್ರ್ಸ್ ವಿಭಾಗದಲ್ಲಿ ವ್ಯಾಸಂಗಮಾಡಿ ಬಿ.ಎ. ಪರೀಕ್ಷೆಯನ್ನು ಮುಗಿಸಿದರು. (1927). ಆ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಪಡೆದವರಾಗಿ ಚಿನ್ನದ ಪದಕ ಮತ್ತು ಬಹುಮಾನಗಳನ್ನು ಗಳಿಸಿದರು. ಅದೇ ವರ್ಷ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಆರಂಭವಾಗಿದ್ದ ಕನ್ನಡ ಎಂ.ಎ. ತರಗತಿಗೆ ಸೇರಿ, ಎರಡು ವರ್ಷಗಳ ವ್ಯಾಸಂಗದ ಬಳಿಕ, ಪ್ರಥಮ ದರ್ಜೆ ಪ್ರಥಮ ಸ್ಥಾನಗಳೊಡನೆ ಎಂ.ಎ. ಪದವೀಧರರಾದರು. (1929). ಆ ವರ್ಷವೇ, ಮೈಸೂರು ವಿಶ್ವವಿದ್ಯಾನಿಲಯದಿಂದ ಅದೇ ತಾನೆ ಏರ್ಪಾಡಾಗಿದ್ದ ಸಂಶೋಧನ ವಿದ್ಯಾರ್ಥಿವೇತನ ಪಡೆದುಕೊಂಡು, ವೀರಶೈವ ಸಾಹಿತ್ಯದ ಆರಂಭಕಾಲವನ್ನು ಕುರಿತು ಸಂಶೋಧನೆ ನಡೆಸಿದರು.

	1930ರಲ್ಲಿ, ಮೈಸೂರಿನ ಪ್ರಾಚ್ಯವಿದ್ಯಾಸಂಶೋಧನ ಸಂಸ್ಥೆಯಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿದ ಆಚಾರ್ಯರು, ಅಲ್ಲಿದ್ದ ಎರಡು ವರ್ಷಗಳಲ್ಲಿ ಎರಡು ಪ್ರಾಚೀನ ಗ್ರಂಥಗಳ ಸಕಲ ವೈದ್ಯ ಸಂಹಿತಾರಾರ್ಣವದ ಮತ್ತು ಕುಮಾರವ್ಯಾಸ ಭಾರತದ ಭೀಷ್ಮಪರ್ವ ಸಂಪಾದನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರು. ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಮಹಾರಾಜ ಕಾಲೇಜಿನಲ್ಲಿಯೂ ಒಪ್ಪೊತ್ತಿನ ಕನ್ನಡ ಪಂಡಿತರಾಗಿ ಪಾಠ ಹೇಳುತ್ತಿದ್ದರು. 1932ರಲ್ಲಿ ಪೂರ್ಣಕಾಲದ ಪಂಡಿತರಾಗಿ ಅದೇ ಕಾಲೇಜಿಗೆ ಬಂದರು. ಇದಾದ ಏಳು ವರ್ಷಗಳ ಮೇಲೆ, 1939ರಲ್ಲಿ, ಮೈಸೂರಿನ ಇಂಟರ್‍ಮೀಡಿಯೆಟ್ ಕಾಲೇಜಿಗೆ-ಈಗಿನ ಯುವರಾಜ ಕಾಲೇಜಿಗೆ ಬಂದರು. 1941ರಲ್ಲಿ ಮತ್ತೆ ಮಹಾರಾಜ ಕಾಲೇಜಿಗೆ ಬಂದು, ಬಳಿಕ 1945ರಲ್ಲಿ ಉಪಪ್ರಾಧ್ಯಾಪಕ ಸ್ಥಾನಕ್ಕೆ ಬಡ್ತಿ ಪಡೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಹೋದರು. ಮೂರು ವರ್ಷಗಳ ಮೇಲೆ ಮತ್ತೆ ಮಹಾರಾಜ ಕಾಲೇಜಿಗೆ ಹಿಂದಿರುಗಿ, 1954ರವರೆಗೆ ಅಲ್ಲಿದ್ದು, ಆ ವರ್ಷ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡು ಬೆಂಗಳೂರಿಗೆ ತೆರಳಿದರು. 1956ರಲ್ಲಿ ಪ್ರಾಧ್ಯಾಪಕ ಪದವಿಗೆ ಬಡ್ತಿ ಪಡೆದು, ಅಲ್ಲಿಂದ ಮಹಾರಾಜ ಕಾಲೇಜಿಗೆ ಮರಳಿದವರು, 31-3-1962ರಲ್ಲಿ ಅಧ್ಯಾಪನ ವೃತ್ತಿಯಿಂದ ನಿವೃತ್ತರಾದರು. ಆದರೆ ಅಧ್ಯಯನ, ಸಂಶೋಧನ ಕಾರ್ಯಗಳು ಮಾತ್ರ ಇನ್ನೂ ವ್ಯಾಪಕಗೊಂಡವು. 1963ರಿಂದ ಸುಮಾರು ಆರು ವರ್ಷಗಳ ಕಾಲ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಸಂಶೋಧಕ ವಿದ್ವಾಂಸರಾಗಿ ಉತ್ಕøಷ್ಟ ಕೃತಿರಚನೆ ಮಾಡಿದರು. ಆಗಲೇ, ತೀ.ನಂ. ಶ್ರೀಕಂಠಯ್ಯನವರ ನಿಧನದಿಂದ ತೆರವಾದ ಕನ್ನಡ-ಕನ್ನಡ ನಿಘಂಟಿನ ಅಧ್ಯಕ್ಷಪದವಿಯನ್ನೂ ಪ್ರಧಾನಸಂಪಾದಕತ್ವವನ್ನೂ ವಹಿಸಿಕೊಂಡರು.

	ಕನ್ನಡ ಭಾಷೆ ಸಾಹಿತ್ಯಗಳಿಗೆ, ಮುಖ್ಯವಾಗಿ ಸಂಶೋಧನ-ಸಂಪಾದನ ಶಾಖೆಗಳಿಗೆ, ಸಲ್ಲಿಸಿದ ವಿಶೇಷ ಸೇವೆಯಿಂದಾಗಿ ಆಚಾರ್ಯರು 1960ರಲ್ಲಿ ಬಿದರೆಯಲ್ಲಿ ನಡೆದ 41ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಆ ಸಂದರ್ಭದ ಸವಿನೆನಪಿಗಾಗಿ ಇವರ ವ್ಯಕ್ತಿತ್ಮ ವಿದ್ವತ್ತುಗಳನ್ನು ಕುರಿತ ಜ್ಞಾನೋಪಾಸಕ ಎಂಬ ಅಭಿನಂದನ ಗ್ರಂಥವನ್ನು ಇವರಿಗೆ ಅರ್ಪಿಸಿ ವಿಶೇಷವಾಗಿ ಸನ್ಮಾನಿಸಲಾಯಿತು. ಹೀಗೆಯೇ 1967ರಲ್ಲಿ ಮೈಸೂರು ಸರ್ಕಾರ (ಈಗ ಕರ್ನಾಟಕ ಸರ್ಕಾರ) ಇವರಿಗೆ ರಾಜ್ಯಪ್ರಶಸ್ತಿಯನ್ನಿತ್ತು ಗೌರವಿಸಿತು. 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರ ಅಪಾರವಾದ ವಿದ್ವತ್ತನ್ನು ಮನ್ನಿಸಿ ಗೌರವ ಡಿ.ಲಿಟ್. ಪದವಿಯನ್ನು ನೀಡಿತು.

	ಆಚಾರ್ಯರು ಮೈಸೂರು ವಿಶ್ವವಿದ್ಯಾನಿಲಯ, ವಿದ್ಯಾ ಇಲಾಖೆಗಳಲ್ಲಿಯೂ ಉಸ್ಮಾನಿಯ ಮೊದಲಾದ ಬೇರೆ ವಿಶ್ವವಿದ್ಯಾನಿಲಯಗಳಲ್ಲಿಯೂ ಬೇರೆ ಬೇರೆ ವಿದ್ಯಾಸಮಿತಿಗಳಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ-ಕನ್ನಡ ನಿಘಂಟು ಯೋಜನೆಗೆ ಎ.ಆರ್. ಕೃಷ್ಣಶಾಸ್ತ್ರಿಗಳು, ತೀ.ನಂ. ಶ್ರೀಕಂಠಯ್ಯನವರು ಅಧ್ಯಕ್ಷರಾಗಿದ್ದಾಗಲೂ ಅವರ ಅನಂತರದಲ್ಲಿಯೂ ಪ್ರಬಲವಾದ ಒತ್ತಾಸೆಯಾಗಿದ್ದು, ಶಕ್ತಿಯಾಗಿದ್ದು. ಆ ಯೋಜನೆ ಸುವ್ಯವಸ್ಥಿತವಾಗಿಯೂ ಸುಭದ್ರವಾಗಿಯೂ ಮುನ್ನಡೆಯಲು ಬಹುವಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣಮಹೋತ್ಸವದ ಸಮಯದಲ್ಲಿ (1970) ಇವರ ಸಮಕ್ಷದಲ್ಲಿಯೇ ನಿಘಂಟಿನ ಮೊದಲನೆಯ ಸಂಪುಟ ಬಿಡುಗಡೆಯಾಯಿತು. ಶ್ರೀಯುತರು 1959-62ರ ಅವಧಿಯಲ್ಲಿ ಪ್ರಬುದ್ಧ ಕರ್ನಾಟಕದ ಪ್ರಧಾನ ಸಂಪಾದಕರಾಗಿದ್ದು, ಆ ಪತ್ರಿಕೆಯ ಬೆಳವಣಿಗೆಗೆ ಕೂಡ ಶ್ರಮಿಸಿದರು.

	ಆಚಾರ್ಯರು ಸಮರ್ಥ ಹಾಗೂ ಶ್ರದ್ಧಾವಂತ ಅಧ್ಯಾಪಕರು; ಶ್ರೇಷ್ಠ ದರ್ಜೆಯ ಹಾಗೂ ಬಹುಮುಖ ವ್ಯಾಸಂಗದ ವಿದ್ವಾಂಸರು. ಸು.40 ವರ್ಷಗಳಿಗೆ ಮೇಲ್ಪಟ್ಟಷ್ಟು ಕಾಲ, ಕನ್ನಡ ಭಾಷೆ ಸಾಹಿತ್ಯಗಳ ಏಳಿಗೆಗೆ ತಮ್ಮ ಶಕ್ತಿಸರ್ವಸ್ವವನ್ನೂ ವಿನಿಯೋಗಿಸಿದರು. ಕನ್ನಡ ಭಾಷೆ ಸಾಹಿತ್ಯಗಳ ಏಳಿಗೆಯನ್ನು ತಮ್ಮ ಬದುಕಿನ ದೀಕ್ಷೆಯನ್ನಾಗಿ ಗ್ರಹಿಸಿ, ಅವುಗಳಲ್ಲಿ ತಕ್ಕ ಪ್ರೌಢಿಮೆಯನ್ನು ಮೊದಲು ತಾವು ಗಳಿಸಿಕೊಂಡು, ಅನಂತರ ಚಿಂತನ ವಿಚಾರವಿಮರ್ಶೆ ಸಿದ್ಧಾಂತಗಳ ಫಲವನ್ನು ಹಲವು ವರ್ಷಗಳವರೆಗೆ ತಮ್ಮ ಹಲವಾರು ವಿದ್ಯಾರ್ಥಿಗಳಿಗೆ ಅಧ್ಯಾಪನದ ಮೂಲಕವಾಗಿ ಕೈಗೂಡಿಸಿದರು. ಇವರ ಜತೆಗೆ ಆಗಿಂದಾಗ್ಗೆ ಲೇಖನಗಳ ಮೂಲಕವೂ ಕೃತಿಗಳ ಮೂಲಕವೂ ಅವುಗಳಿಗೆ ನಿಷ್ಕøಷ್ಟರೂಪವನ್ನು ಕೊಟ್ಟು ಕನ್ನಡ ಸಾಹಿತ್ಯದ ಶಕ್ತಿಯನ್ನೂ ಸಂಪತ್ತನ್ನೂ ಬೆಳೆಸಿದರು. ಭಾಷೆ, ವ್ಯಾಕರಣ, ನಿಘಂಟು, ಗ್ರಂಥಸಂಪಾದನೆ, ಛಂದಸ್ಸು, ಶಾಸನಗಳು, ಪ್ರಾಚೀನ ಸಾಹಿತ್ಯ- ಇವನ್ನು ತಮ್ಮ ಕಾರ್ಯಕ್ಷೇತ್ರದ ವಿಷಯಗಳನ್ನಾಗಿ ಹಿಡಿದು ಆ ಒಂದೊಂದು ವಿಷಯದಲ್ಲೂ ಅವಿರಾಮಶೀಲವಾದ ಗಾಢವಾದ ಸಂಶೋಧನಗಳ ಮೂಲಕ ಕನ್ನಡ ವಿದ್ವತ್ತನ್ನು ಬಲಪಡಿಸಿದರು. ಕನ್ನಡ ಸಾಹಿತ್ಯದ ಮೂಲಾಧಾರಗಳನ್ನು ಕಟ್ಟಿದರು, ಗಟ್ಟಿಮಾಡಿದರು. ಅವರ ಬೆಲೆಯುಳ್ಳ ಮೌಲಿಕ ರಚನೆಗಳು ನಿರಂತರ ಅಧ್ಯಯನ ಅಧ್ಯಾಪನಗಳ ವೈಜ್ಞಾನಿಕ ದೃಷ್ಟಿಯ ಅನುಸಂಧನ ಸಂಯೋಜನಗಳ ಫಲವಾಗಿ ಮೂಡಿಬಂದವು. ಜ್ಞಾನೋಪಾಸನೆಯೇ ಜೀವಿತ ಸಾರ್ಥಕ್ಯವೆಂದೂ ಸಾಹಿತ್ಯೋಜ್ಜೀವನವೇ ಜೀವನ ಧ್ಯೇಯವೆಂದೂ ನಂಬಿ ಅವರು ಕೃತಿರಚನೆ ಮಾಡುತ್ತಿದ್ದುದರಿಂದ ಅವರ ರಚನೆಗಳಲ್ಲಿ ಅವರ ಶುದ್ಧವಾದ ಅಭಿರುಚಿ, ಗಾಢವಾದ ಸಂಶೋಧನ ಸಾಮಥ್ರ್ಯ, ನಿಷ್ಕøಷ್ಟವಾದ ವಿಚಾರಧಾರೆ, ಪ್ರಖರವಾದ ವಿಶ್ಲೇಷಕಪಟುತ್ವ, ವಸ್ತುನಿಷ್ಠೆಯ ಛಲಗಾರಿಕೆ, ಚಿರಕಾಲಿಕ ಸತ್ತ್ವ ಅನಂತಕಾಂತಿ ಈ ಗುಣಗಳೆಲ್ಲ ಮೇಲಾಗಿ ಪ್ರತಿಫಲಿಸಿ ತೋರುತ್ತಿದ್ದವು.

	ಆಚಾರ್ಯರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 70-80 ಸಂಶೋಧನ ಲೇಖನಗಳನ್ನು ಬರೆದು ನಾಡಿನ ಬೇರೆ ಬೇರೆ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಇವುಗಳಲ್ಲಿ ಬಹುಪಾಲು ಕನ್ನಡ ಭಾಷೆ ಸಾಹಿತ್ಯಗಳ ಮುಖ್ಯವೂ ಜಟಿಲವೂ ಆದ ಸಮಸ್ಯೆಗಳನ್ನೂ ವಿಷಯಗಳನ್ನೂ ಕುರಿತವಾಗಿವೆ. ಪ್ರಾಚೀನ ಸಾಹಿತ್ಯ, ಆ ಸಾಹಿತ್ಯದ ವಿಮರ್ಶೆ ಮತ್ತು ಚರಿತ್ರೆ, ಗ್ರಂಥಸಂಪಾದನೆ, ಶಬ್ದಾರ್ಥ ವಿಚಾರ - ಇವು ಅವರಿಗೆ ಬಹು ಮೆಚ್ಚಿಗೆಯ ವಿಷಯಗಳು. ಸಕಲವೈದ್ಯ ಸಂಹಿತಾ ಸರಾರ್ಣವ, ಭೀಷ್ಮಪರ್ವ, ಪಂಪರಾಮಾಯಣ ಸಂಗ್ರಹ, ವಡ್ಡಾರಾಧನೆ, ಸಿದ್ಧರಾಮಚರಿತೆಯ ಸಂಗ್ರಹ, ಶಬ್ದಮಣಿದರ್ಪಣ, ಗೋವಿನ ಹಾಡು- ಇವು ಅವರಿಂದ ಸಂಪಾದಿತವಾದ ಗ್ರಂಥಗಳು. ಇವುಗಳಲ್ಲದೆ ಇತರರೊಡನೆ ಸೇರಿ ಸಿದ್ಧರಾಮಚಾರಿತ್ರ, ಸುಕುಮಾರಚರಿತೆ ಇವನ್ನು ಸಂಪಾದಿಸಿದ್ದಾರೆ. ಇವೆಲ್ಲ ಬಹುಮಟ್ಟಿಗೆ ಶಾಸ್ತ್ರೀಯವಾದ ಗ್ರಂಥಸಂಪಾದನೆಯ ನಿಯಮಗಳಿಗೆ ಅನುಸಾರವಾಗಿ ಸಂಪಾದಿತವಾಗಿವೆಲ್ಲದೆ, ವಿದ್ವತ್‍ಪೂರ್ಣವಾದ ಉಪೋದ್ಘಾತ, ಟಿಪ್ಪಣಿಗಳು, ಶಬ್ದಕೋಶ ಮೊದಲಾದ ಸಹಾಯಕ ಸಾಮಗ್ರಿಗಳನ್ನೂ ಒಳಗೊಂಡಿವೆ. ಶಬ್ಧವಿಹಾರ ಎಂಬುದು ಪ್ರಾಚೀನ ಸಾಹಿತ್ಯದ ಶಬ್ದಾರ್ಥವಿಚಾರವನ್ನು ಕುರಿತ ಗ್ರಂಥ. ಕನ್ನಡ ಗ್ರಂಥ ಸಂಪಾದನೆಯೆಂಬುದು ಗ್ರಂಥಸಂಪಾದನಶಾಸ್ತ್ರವನ್ನೂ ಕನ್ನಡ ಗ್ರಂಥಸಂಪಾದನೆಯ ನಾನಾಮುಖಗಳನ್ನೂ ಒಳಗೊಂಡಿರುವ ಅತ್ಯುಪಯುಕ್ತವಾದ ಶಾಸ್ತ್ರಗ್ರಂಥ. ಪಂಪಭಾರತ ದೀಪಿಕೆಯೆಂಬುದು ಆ ಗ್ರಂಥಕ್ಕೆ ಸವಿವರವಾದ ಹಾಗೂ ಬೆಲೆಯುಳ್ಳ ಟಿಪ್ಪಣಿಗಳನ್ನು ಕೊಟ್ಟಿರುವ ಸಹಾಯಕ ಗ್ರಂಥ. ಪೀಠಿಕೆಗಳು ಲೇಖನಗಳು ಎಂಬ ಬೃಹದ್‍ಗ್ರಂಥ ಆಚಾರ್ಯರ ಸಂಶೋಧನ ಮತ್ತು ಇತರ ಲೇಖನಗಳ ಸಮುಚ್ಚಯ.								
		(ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ